ಶನಿವಾರ, ಸೆಪ್ಟೆಂಬರ್ 8, 2012

ಬೇಕಾಗಿದೆ

ಜಟಿಲ ನೆಲವ ಗುಮ್ಮಿ,ಚಿಮ್ಮಿ
ಪುಟಿದು ಕೊನರುವ ಮೊಳಕೆಗೆ
ಕುಟಿಲ ಕೊಡಲಿಯ ಪೆಟ್ಟು ತಡೆಯುವ

ದಿಟ್ಟತನ ಬರಬೇಕಿದೆ //

ತುಂಡನೆರಡು ಒಂದು ಮಾಡುವ
ಗುಂಡು ಸೂಜಿಯ ಮೊನೆಗೆ
ಬಂಧ ಕಳಚಿದ ಭಾವ ನೇಯುವ
ಚೆಂದ ದಾರ ಬೇಕಿದೆ //

ಇಳೆಯ ಕೊಳೆಯ ತೊಳೆದು ಹರಿವ
ಮಳೆಯ ಹನಿಗಳ ರಾಶಿಗೆ
ಕೊಳೆತ ಮಾನಸ ಹೊಳಪುಗೊಳಿಸುವ
ಸೆಳೆತ ಬರಬೇಕಿದೆ //

ಹತ್ತಿ ಬತ್ತಿಯ ನೆತ್ತಿಗಂಟಿ
ಹೊತ್ತಿ ಬೆಳಗುವ ಹಣತೆಗೆ
ಚಿತ್ತ ತಾಮಸ ಸುಟ್ಟು ಹಾಕುವ
ಶಕ್ತಿ ಬರಬೇಕಿದೆ //

ಕಾಡ ಸಕ್ಕರೆ ಹೀರಿ ಹಾರಿ
ಗೂಡು ಕಟ್ಟುವ ಜೇನಿಗೆ
ನಾಡಭಾಷೆಗೆ ಸವಿಯ ಹನಿಸುವ
ರೂಢಿಯಾಗಬೇಕಿದೆ //
- ಗುರುನಾಥ ಬೋರಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ