ಹನಿಗಳು
ಸಾಲ ಮಾಡಿ ತುಪ್ಪ ತಿನ್ನಲು
ಅವನದು,ಎತ್ತಿದ ಕೈ.
ಅಸಲು ಕೂಡ ತೀರಿಸಲಾಗದೆ
ಎತ್ತಿದ, ಕೈ.
*****
ಎಷ್ಟು ಭಾವಜಲ
ಹರಿದರೇನು
ನಮ್ಮ ಹೃದಯ
ನಾಲೆಗೆ?
ಮೌನ ಭಾವಗಳಿಗೆ
ಮಾತಾಗದಿರೆ ನಮ್ಮ,
ನಾಲಗೆ
******
ಕಾಲದ ಹಂಗಿಲ್ಲದೆ
ನೋವಿಗೂ,ನಲಿವಿಗೂ
ಸದಾ ಹನಿಯುವ ಮಳೆ;
ಹುಬ್ಬಕೊಡೆಯ ಕೆಳಗಿನ
ಕಣ್ಣ ಮಳೆ.
*******
ನಿಷ್ಕರುಣಿ ವೈಧವ್ಯಕೆ
ಶಪಿಸಿದ್ದು,ಮರುಗಿದ್ದು ಸಾಕು.
ಬರಿ ಹಣೆಗೆ ಸಿಂಧೂರವಾಗುವ
ಮನಸು ನಿನ್ನದಾಗಬೇಕು.
*******
ನೀನು ತಿನಿಸುವ ತುತ್ತಿನಲಿ
ಇರದಿದ್ದರೂ ಚಿಂತೆಯಿಲ್ಲ;
ಉಪ್ಪು-ಖಾರ, ಹಾಲು-ಸಕ್ಕರೆ.
ಇದ್ದರಷ್ಟೇ ಸಾಕು;
ನಾ ನಿನ್ನವನೆಂಬ ಅಕ್ಕರೆ.
********
ಕೆಲವೊಮ್ಮೆ,
ಅಪಾರ್ಥವಾಗುತ್ತದೆ
ದಿನಪತ್ರಿಕೆಯ ಸುದ್ದಿಯಿಂದ.
ಒಂದು ತಲೆಬರಹ ನೋಡಿ;
'ಐಶ್ವರ್ಯ ರೈ ಗೆ ಹೆಣ್ಣು ಮಗು'
(ನಮ್ಮ ಪ್ರತಿನಿಧಿಯಿಂದ )
- ಗುರುನಾಥ ಬೋರಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ