ಶನಿವಾರ, ಸೆಪ್ಟೆಂಬರ್ 8, 2012

ನಾವು ಸುದ್ದಿಗಾರರೇ ಹೀಗೆ..

ಗೋರಿಯೊಳಗೆ ಹೂತು ಹೋದ
ಹೆಣಗಳನ್ನು ಅಗಿದು ತೆಗೆದು
ಬುರುಡೆಗಳಿಗೆ ಮಾಂಸ ಮೆತ್ತಿ

ಜೀವ ತುಂಬುತ್ತೇವೆ;
ಕೊಳೆತು ಹೋದ ಸಣ್ಣ ಸತ್ಯಕೆ
ಬಣ್ಣ ಬಳಿಯುತ್ತೇವೆ.

ಎಲ್ಲಿಂದಲೋ ಸಿಡಿದ ರಾಡಿಗೆ
ಯಾವುದೊ ಹಳೆಯ ಸೇಡಿಗೆ
ಯಾರನೋ ಹುಡುಕಿ ತಂದು
ಬೆತ್ತಲಾಗಿಸುತ್ತೇವೆ ;
ಪ್ರಸಾರದ ಪ್ರಖರತೆಯೊಳಗೂ
ಕತ್ತಲಾಗುತ್ತೇವೆ.

ಕಳಂಕಿತರ ಬೆನ್ನೊಲೆಗೆ
ವರದಿಗಳ ಉರಿ ಹೊತ್ತಿಸಿ
ಇಂದು ನಾಳೆಯ ಅನ್ನ ಈಗಲೇ
ಬೇಯಿಸಿಕೊಳ್ಳುತ್ತೇವೆ;
ಚಿತೆಯ ಬೆಂಕಿಗೆ ಮೈಯೊಡ್ಡಿ
ಚಳಿ ಕಾಯಿಸಿಕೊಳ್ಳುತ್ತೇವೆ

ಆಗೊಮ್ಮೆ.. ಈಗೊಮ್ಮೆ
ನೊಂದವರ ಪರ ನಿಂತು
ಕಪ್ಪು ಎದೆಗೆ ಬಿಳಿಯ ಬಣ್ಣ
ಲೇಪಿಸಿಕೊಳ್ಳುತ್ತೇವೆ;
ತಪ್ಪು-ಸರಿ ಲೆಕ್ಕಗಳಿಗೆ
ಸಾಕ್ಷಿಯಾಗುತ್ತೇವೆ.
- ಗುರುನಾಥ ಬೋರಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ